ಸಾಹಿತಿ ಬರಗೂರು ರಾಮಚಂದ್ರಪ್ಪ, ಹೋರಾಟಗಾರ ಕ.ನ. ಚಂದ್ರಶೇಖರ್ ಹಾಗೂ ಜಾಣಗೆರೆ ವೆಂಕಟರಾಮಯ್ಯ ಭೇಟಿ ಮಾಡಿ ಬೆಂಬಲ ಕೋರಿದ ಹೋರಾಟಗಾರರು
ಬೆಂಗಳೂರು: ರಾಜ್ಯದಲ್ಲಿ ಎಲ್ಲ ವರ್ಗದ ಮಕ್ಕಳಿಗೂ ಸಮಾನ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಆಗ್ರಹದೊಂದಿಗೆ ಏಕರೂಪ ಸಮಾನ ಶಿಕ್ಷಣಕ್ಕಾಗಿ ನವೆಂಬರ್ 28, 2026ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಲಾಗಿದೆ.
ಈ ಹೋರಾಟದ ಹಿನ್ನೆಲೆಯಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ಹೋರಾಟಗಾರರಾದ ಕ.ನ. ಚಂದ್ರಶೇಖರ್ ಹಾಗೂ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಭೇಟಿ ಮಾಡಿದ ಹೋರಾಟಗಾರರು, ರಾಜ್ಯದಲ್ಲಿ ಏಕರೂಪ ಸಮಾನ ಶಿಕ್ಷಣ ಜಾರಿಗೊಳಿಸುವ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಕಳೆದ ವರ್ಷ ಡಿಸೆಂಬರ್ 2025ರಲ್ಲಿ ನಡೆದ ಮೂರು ದಿನಗಳ ಉಪವಾಸ ಸತ್ಯಾಗ್ರಹ, ಜನವರಿ 26ರಂದು ನಡೆದ ಕಪ್ಪುಬಾವುಟ ಪ್ರದರ್ಶನ ಹಾಗೂ ಏಪ್ರಿಲ್ 11ರಿಂದ ಜೂನ್ 6ರವರೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ 1,295 ಕಿ.ಮೀ. ಐತಿಹಾಸಿಕ ಪಾದಯಾತ್ರೆ, ಜೂನ್ 6ರಂದು ಸಾವಿರಾರು ಜನರ ಭಾಗವಹಿಸುವಿಕೆಯಲ್ಲಿ ನಡೆದ ಬೃಹತ್ ಪಂಜಿನ ಮೆರವಣಿಗೆ ಸೇರಿದಂತೆ ಹಲವು ಹಂತಗಳಲ್ಲಿ ಹೋರಾಟ ನಡೆಸಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಇಷ್ಟೆಲ್ಲಾ ಹೋರಾಟಗಳ ಮೂಲಕ ರಾಜ್ಯದ ಜನತೆಗೆ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿದ್ದರೂ, ಸರ್ಕಾರದಿಂದ ನಿರೀಕ್ಷಿತ ಸ್ಪಂದನೆ ದೊರೆಯದಿರುವುದು ಬೇಸರದ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವೆಂಬರ್ 28ರಿಂದ ನಿರ್ಣಾಯಕ ಹೋರಾಟ
ಹೋರಾಟದ ಮುಂದುವರೆದ ಭಾಗವಾಗಿ ನವೆಂಬರ್ 28, 2026ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಲಾಗಿದೆ.
ಇದರ ಜೊತೆಗೆ ರಾಜ್ಯದ ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ವಿವಿಧ ಇಲಾಖೆಗಳಿಗೆ ಇದುವರೆಗೆ ಸಲ್ಲಿಸಿರುವ ಲಕ್ಷಾಂತರ ಅರ್ಜಿಗಳ ಪ್ರತಿಗಳನ್ನು ಸಂಗ್ರಹಿಸಿ, ರಾಜ್ಯದ 45,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ SDMC ಸದಸ್ಯರ ಮೂಲಕ ಮುಖ್ಯಮಂತ್ರಿಗೆ ತುಲಾಭಾರ ಮಾಡುವ ವಿನೂತನ ಹೋರಾಟ ನಡೆಸಲು ಉದ್ದೇಶಿಸಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
“ಸರ್ಕಾರಿ ಶಾಲೆ ನನ್ನವ್ವ” — ಶಿಕ್ಷಣ ಕ್ರಾಂತಿಗೆ ಕರೆ
“ಸರ್ಕಾರಿ ಶಾಲೆ ನನ್ನವ್ವ” ಎಂಬ ಘೋಷವಾಕ್ಯದಡಿ ನಡೆಯಲಿರುವ ಈ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಂಘ, ಹಿರಿಯ ವಿದ್ಯಾರ್ಥಿಗಳ ಬಳಗ ಹಾಗೂ ವಿವಿಧ ಕನ್ನಡಪರ ಮತ್ತು ಶಿಕ್ಷಣಪರ ಸಂಘಟನೆಗಳು, ಸಾರ್ವಜನಿಕರು ಕೈಜೋಡಿಸಬೇಕೆಂದು ಕರೆ ನೀಡಲಾಗಿದೆ.
ಅದೇ ರೀತಿ “ಏಕರೂಪ ಶಿಕ್ಷಣ ನೀತಿಯನ್ನು ಬೆಂಬಲಿಸದ ದಲ್ಲಾಳಿಗಳಿಗೆ ಮತ ನೀಡುವುದಿಲ್ಲ” ಎಂಬ ಪ್ರತಿಜ್ಞೆಯೊಂದಿಗೆ ಶಿಕ್ಷಣದ ಹಕ್ಕಿಗಾಗಿ ಜನಾಂದೋಲನ ರೂಪಿಸುವುದಾಗಿ ಮುಖಂಡರು ಹೇಳಿದ್ದಾರೆ.
ಐದು ಪ್ರಮುಖ ಆಗ್ರಹಗಳು
ಹೋರಾಟಗಾರರು ಸರ್ಕಾರದ ಮುಂದೆ ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಇಟ್ಟಿದ್ದಾರೆ:
- ರಾಜ್ಯದ 41,905 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲೂ LKGಯಿಂದ 5ನೇ ತರಗತಿಯವರೆಗೆ ದ್ವಿಭಾಷಾ ಮಾಧ್ಯಮದಲ್ಲಿ CBSE ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
- ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ 6ನೇ ತರಗತಿಯಿಂದ 12ನೇ ತರಗತಿಯವರೆಗೆ ನವೋದಯ ಮಾದರಿಯ CBSE ಗುಣಮಟ್ಟದ ವಸತಿ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು.
- ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 80 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರಿ ಶಾಲಾ ಶಿಕ್ಷಕರನ್ನು ಬೋಧಕೇತರ ಕೆಲಸಗಳಿಗೆ ನಿಯೋಜಿಸುವುದನ್ನು ನಿಲ್ಲಿಸಬೇಕು.
- ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಶಿಕ್ಷಣ ಪಡೆಯುವಂತೆ ನಿಯಮ ರೂಪಿಸಬೇಕು ಎಂಬ ಆಗ್ರಹವನ್ನು ಮುಂದಿಡಲಾಗಿದೆ.
- ಸರ್ಕಾರಿ ಶಾಲೆಗಳ ಕಟ್ಟಡ ಕಾಮಗಾರಿಗಳಲ್ಲಿ ನಡೆದಿರುವ ಕಳಪೆ ಕಾಮಗಾರಿಗಳ ಕುರಿತು ಎಸ್ಐಟಿ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
“ಶಿಕ್ಷಣ ಕ್ರಾಂತಿಗೆ ಕನ್ನಡಿಗರು ಕೈಜೋಡಿಸಲಿ”
ಶಿಕ್ಷಣ ಎನ್ನುವುದು ಕೇವಲ ಒಂದು ಇಲಾಖೆಯ ವಿಚಾರವಲ್ಲ; ಅದು ರಾಜ್ಯದ ಭವಿಷ್ಯದ ಪೀಳಿಗೆಯನ್ನು ರೂಪಿಸುವ ಅತ್ಯಂತ ಮಹತ್ವದ ವಿಷಯ. ಆದ್ದರಿಂದ ರಾಜ್ಯದ ಎಲ್ಲಾ ಕನ್ನಡಿಗರು, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು, ರೈತರು, ಕಾರ್ಮಿಕರು ಹಾಗೂ ಶಿಕ್ಷಣಪರ ನಾಗರಿಕರು ಪಕ್ಷಾತೀತವಾಗಿ ಈ ಹೋರಾಟದಲ್ಲಿ ಭಾಗವಹಿಸಿ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯಬೇಕು ಎಂದು ಹೋರಾಟಗಾರರು ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತಿ
ಸುದ್ದಿಗೋಷ್ಠಿಯಲ್ಲಿ ಇಂಡುವಾಳು ಚಂದ್ರಶೇಖರ್ – ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷರು, ಕೀಳಘಟ್ಟ ನಂಜುಂಡಯ್ಯ, ಬನ್ನೂರು ನಾರಾಯಣ್, ತುಮಕೂರು ಯೋಗೇಶ್ ಗೌಡ್ರು, ಸಂತೋಷ್ ಮಂಡ್ಯಗೌಡ, ಧನುಷ್ ಗೌಡ ಹಾಗೂ ತೇಜಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಈ ಬೇಡಿಕೆಗಳ ಬಗ್ಗೆ ಸ್ಪಂದಿಸಿ, ಸರ್ಕಾರಿ ಶಾಲೆಗಳ ಬಲವರ್ಧನೆ ಮತ್ತು ಏಕರೂಪ ಸಮಾನ ಶಿಕ್ಷಣದ ಕುರಿತು ಸ್ಪಷ್ಟ ಕ್ರಮ ಕೈಗೊಳ್ಳಬೇಕೆಂಬುದು ಹೋರಾಟಗಾರರ ಪ್ರಮುಖ ಒತ್ತಾಯವಾಗಿದೆ.
— ಸಿಡಿಲುಧ್ವನಿ ಡಿಜಿಟಲ್ ನ್ಯೂಸ್

