2ಲಕ್ಷ ಲಂಚ ಸ್ವೀಕಾರ ಆರೋಪ: ಗುಬ್ಬಿ RFO ಸೇರಿ ಇಬ್ಬರು ಲೋಕಾಯುಕ್ತ ಶುಕ್ರವಾರ ಲೋಕಾಯುಕ್ತ ಬಲೆಗೆ
ತುಮಕೂರು: ಅರಣ್ಯ ಇಲಾಖೆಯಿಂದ ಮಂಜೂರಾದ ಕಾಮಗಾರಿ ನಡೆಸಲು ಗುತ್ತಿಗೆದಾರರಿಂದ ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ದೂರಿನ ಮೇಲೆ ಗುಬ್ಬಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ (RFO) ಸತೀಶ್ಚಂದ್ರ ಕೆ.ಎಸ್. ಹಾಗೂ ಕ್ಯಾಂಪ್ ವಾಚರ್ ಶೌಖತ್ ಅವರನ್ನು ಶುಕ್ರವಾರ ತುಮಕೂರು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿ 11-09-2026ರಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಮಂಡ್ಯ ಜಿಲ್ಲೆಯ ಬೂತನ ಹೊಸೂರು ಗ್ರಾಮದ ಅರಣ್ಯ ಮತ್ತು ಸಿವಿಲ್ ಗುತ್ತಿಗೆದಾರ ಬಿ.ಜೆ. ಶಿವರಾಜು ಅವರಿಗೆ 2025-26ನೇ ಸಾಲಿನ ಗುಬ್ಬಿ ಅರಣ್ಯ ವಲಯದ ವಿವಿಧ ಕಾಮಗಾರಿಗಳಿಗೆ ಟೆಂಡರ್ ಮಂಜೂರಾಗಿತ್ತು. ಜುಲೈ 13, 2026ರಂದು ಕಾರ್ಯಾದೇಶವೂ ನೀಡಲಾಗಿತ್ತು.
ಆದರೆ ಕಾಮಗಾರಿ ಆರಂಭಿಸಲು RFO ಸತೀಶ್ಚಂದ್ರ ಅವರು ಮಂಜೂರಾದ ಕಾಮಗಾರಿ ಮೊತ್ತದ ಶೇ.30ರಷ್ಟು ಅಥವಾ ₹5 ಲಕ್ಷ ನೀಡುವಂತೆ ಲಂಚಕ್ಕೆ ಒತ್ತಾಯಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಪೈಕಿ ಮೊದಲ ಕಂತಾಗಿ ₹50 ಸಾವಿರ ಪಡೆದಿದ್ದರು ಹಾಗೂ ಇನ್ನೂ ₹3.50 ಲಕ್ಷ ನೀಡುವಂತೆ ಒತ್ತಡ ಹೇರಿದ್ದರು ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲಂಚ ನೀಡಲು ಇಚ್ಛಿಸದ ಗುತ್ತಿಗೆದಾರರು ಸೆಪ್ಟೆಂಬರ್ 11ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ–1988 (ತಿದ್ದುಪಡಿ 2018)ರ ಕಲಂ 7(8) ಅಡಿಯಲ್ಲಿ ಪ್ರಕರಣ ದಾಖಲಿಸಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಗಿದೆ.

ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ₹2 ಲಕ್ಷ ವಶ
ಅದೇ ದಿನ ಮಧ್ಯಾಹ್ನ ಸುಮಾರು 2.45ರ ವೇಳೆಗೆ ಗುಬ್ಬಿ RFO ಕಚೇರಿಯಲ್ಲಿ, ಆರೋಪಿ RFO ಅವರ ಸೂಚನೆಯಂತೆ ಕ್ಯಾಂಪ್ ವಾಚರ್ ಶೌಖತ್ ಅವರು ಗುತ್ತಿಗೆದಾರರಿಂದ ₹2 ಲಕ್ಷ ಲಂಚದ ಹಣ ಸ್ವೀಕರಿಸಿದ ಆರೋಪ ಇದೆ. ಈ ವೇಳೆ ಲೋಕಾಯುಕ್ತ ತಂಡ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಂಧನ ಹಾಗೂ ತನಿಖಾ ಪ್ರಕ್ರಿಯೆ ಕೈಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಡಾ. ಸಂತೋಷ್ ಕೆ.ಎಂ. ಮತ್ತು ಮಂಜುನಾಥ್ ಎಂ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪೊಲೀಸ್ ನಿರೀಕ್ಷಕರಾದ ಶಾಂತಿನಾಥ ಜೆ. ವನ್ನೂರ, ರಾಜು ಟಿ. ಮತ್ತು ರಾಘವೇಂದ್ರ ಜಿ.ಕೆ. ಸೇರಿದಂತೆ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
ಪ್ರಕರಣದ ತನಿಖೆ ಮುಂದುವರೆದಿದೆ.
ಸಿಡಿಲುಧ್ವನಿ | ಜನರ ಧ್ವನಿ – ಸತ್ಯದ ಸಿಡಿಲು

