
ಸಾಮಾಜಿಕ ಭದ್ರತಾ ಪಿಂಚಣಿ ಫಲಾನುಭವಿಗಳಿಗೆ ಗುಡ್ ನ್ಯೂಸ್ : 23 ಲಕ್ಷ ಅನುಮಾನಾಸ್ಪದ ಪ್ರಕರಣಗಳಲ್ಲಿ 32 ಸಾವಿರದಿಂದ 1.20 ಲಕ್ಷ ಆದಾಯದವರಿಗೆ ಪಿಂಚಣಿ ಕಟ್ ಇಲ್ಲ – ರಾಜ್ಯ ಸರ್ಕಾರದ ಮಹತ್ವದ ಆದೇಶ
ಬೆಂಗಳೂರು, ಆ.18: ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಅನುಮಾನಾಸ್ಪದವಾಗಿ ಪಿಂಚಣಿ ಪಡೆಯುತ್ತಿದ್ದ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ ಡಿ/235/ಕೆಎಟಿ/ಎಸ್ ಎಸ್ ಪಿ/2026, ದಿನಾಂಕ: 18.08.2026
ಏನಿದು ಪ್ರಕರಣ?
ಕುಟುಂಬ ದಾಖಲಾತಿ (Kutumba) ದತ್ತಾಂಶದೊಂದಿಗೆ ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯನ್ನು ತಾಳೆ ಮಾಡಿದಾಗ 23,14,544 ಫಲಾನುಭವಿಗಳು ಅನುಮಾನಾಸ್ಪದ ಎಂದು ಕಂಡುಬಂದಿತ್ತು.
ಈ ಹಿನ್ನೆಲೆಯಲ್ಲಿ ಸಂಯೋಜನೆ ಮೊಬೈಲ್ ಆ್ಯಪ್ ಮೂಲಕ ಭೌತಿಕ ಪರಿಶೀಲನೆ ನಡೆಸಲಾಗಿತ್ತು. ಪರಿಶೀಲನೆ ವೇಳೆ ವಾಸಸ್ಥಳದ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ ಸೇರಿದಂತೆ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಲಾಗಿತ್ತು. ಒಟ್ಟು 18,06,032 ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸರ್ಕಾರ ಚಿಂತನೆ ನಡೆಸಿತ್ತು.
ಗ್ರಾಮ ಆಡಳಿತ ಅಧಿಕಾರಿಗಳು ಸಂಯೋಜನೆ ಮೊಬೈಲ್ ಆ್ಯಪ್ ಮೂಲಕ ಪರಿಶೀಲಿಸಿದ ನಂತರ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರರು ನಿಯಮಾನುಸಾರ ಅರ್ಹ ಫಲಾನುಭವಿಗಳ ಪಿಂಚಣಿ ಮುಂದುವರಿಸಲು ನಿರ್ದೇಶನ ನೀಡಲಾಗಿತ್ತು.
ಭೌತಿಕ ಪರಿಶೀಲನೆ ವೇಳೆ ಬಹುತೇಕ ಫಲಾನುಭವಿಗಳ ವಾರ್ಷಿಕ ಆದಾಯ ರೂ.32,000/- ಕ್ಕಿಂತ ಹೆಚ್ಚು ಹಾಗೂ ರೂ.1,20,000/- ರ ಮಿತಿಯಲ್ಲಿದೆ ಎಂಬುದು ಕಂಡುಬಂದಿದೆ.
ಸರ್ಕಾರದ ಅಂತಿಮ ನಿರ್ಧಾರ ಏನು?
ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಆದೇಶ ದಿನಾಂಕ 18.08.2026 ರ ಅನ್ವಯ,
ರಾಜ್ಯದಲ್ಲಿ ಕಂಡುಬಂದ 23,14,544 ಅನುಮಾನಾಸ್ಪದ ಪ್ರಕರಣಗಳ ಪೈಕಿ, ಪರಿಶೀಲನೆ ಬಾಕಿ ಇರುವ ಫಲಾನುಭವಿಗಳಲ್ಲಿ ಪರಿಶೀಲನೆ ನಂತರ ವಾರ್ಷಿಕ ಆದಾಯ ರೂ.32,000 ದಿಂದ ರೂ.1,20,000/- ಒಳಗಡೆ ಹೊಂದಿರುವ ಎಲ್ಲಾ ಫಲಾನುಭವಿಗಳಿಗೆ ಅನ್ವಯವಾಗುವಂತೆ ಪಿಂಚಣಿಯನ್ನು ಮುಂದುವರಿಸಲು ಆದೇಶಿಸಲಾಗಿದೆ.
ಇದರಿಂದ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಪಿಂಚಣಿದಾರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
- ಸರ್ಕಾರದ ಸುತ್ತೋಲೆ ಸಂಖ್ಯೆ ಆರ್ ಡಿ/113/ಕೆಎಟಿ/ಎಸ್.ಎಸ್.ಪಿ/2026, ದಿನಾಂಕ: 13.05.2026
- CKSDMA-SSPOSCSE(NK)/3/2025 ರಲ್ಲಿ ಮಾನ್ಯ ಉಪ ಮುಖ್ಯಮಂತ್ರಿ ಆದೇಶ ದಿನಾಂಕ 18.08.2026


