ಹಾವೇರಿ: ದಾಖಲೆ ಸರಿಪಡಿಸಲು ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಬ್ಯಾಡಗಿ ತಾಲೂಕು ಅಧ್ಯಕ್ಷರು ಹಾಗೂ ರೈತರು ಆಗಿರುವ ನಾಗರಾಜ್ ಇವರ ದೂರು ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕಾಗಿನೆಲೆ ಕಂದಾಯ ನಿರೀಕ್ಷಕ ಆರ್.ಸಿ.ದ್ಯಾಮನಗೌಡ್ರು ಅವರನ್ನು ಗುರುವಾರ ಮಧ್ಯಾಹ್ನ ಬಲೆಗೆ ಬೀಳಿಸಿದ್ದಾರೆ
ಹಿನ್ನೆಲೆ; ಕಾಸಂಬಿ ಗ್ರಾಮದ ನಿವಾಸಿ ನಾಗರಾಜ್ ಒಲೇಕಾರ (ಕೆಂಪಲಿಂಗಣ್ಣನವರ್) ಹಾಗೂ ಸುಶೀಲಮ್ಮ ಶೇಖಪ್ಪ ಕೋಟಿಹಾಳ ಅವರ ಕೃಷಿ ಜಮೀನಿನ 13/2 ಕಾಲಂ 11 ರಲ್ಲಿ ಹೊಸ ಶರತ್ತಿನ ಬದಲಾಗಿ, ಹಳೆ ಶರತ್ತು ಮಾಡಿ ಉತಾರ ದುರಸ್ತಿ ಮಾಡಿಕೊಡಲು ಕಂದಾಯ ನಿರೀಕ್ಷಕರು 12,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಇದರಿಂದ ಬೇಸತ್ತ ಅರ್ಜಿದಾರರು ಲೋಕಾಯುಕ್ತ ಪೊಲೀಸರನ್ನು ಭೇಟಿ ಮಾಡಿ ದೂರು ನೀಡಿದ ಕಾರಣ
ದೂರಿನ ಆಧಾರದ ಮೇಲೆ ಬಲೆ ಬೀಸಿದ ಲೋಕಾಯುಕ್ತ ಅಧಿಕಾರಿಗಳು, ಗುರುವಾರ ಮಧ್ಯಾಹ್ನ ಸುಮಾರು 1 ಗಂಟೆ ಯ ವೇಳೆಗೆ ಕುಮ್ಮೂರು ಕ್ರಾಸ್ ಬಳಿ 5,000 ರೂ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಕಂದಾಯ ನಿರೀಕ್ಷಕ ಆರ್.ಸಿ. ದ್ಯಾಮನಗೌಡ್ರು ಅವರನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಸ್ಥಳದಲ್ಲೇ ಅಗತ್ಯ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಬಳಿಕ ಆರೋಪಿ ಅಧಿಕಾರಿಯನ್ನು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿ, ದಸ್ತಗೀರ ಮಾಡಲಾಗಿದ್ದು ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರಿಸಿದ್ದಾರೆ.
ಪ್ರಕರಣದ ತನಿಖೆಯನ್ನ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ, ಡಿವೈಎಸ್ಪಿ ಮಧುಸೂಧನ, ಇವರ ಮಾರ್ಗದರ್ಶನದಲ್ಲಿ ಕೈಗೊಂಡಿದ್ದು, ತನಿಖಾಧಿಕಾರಿಗಳಾದ ಲೋಕಾಯುಕ್ತ ಪೊಲೀಸ್ ಇನ್ಸೆಕ್ಟರ್ ವಿಶ್ವನಾಥ್ ಕಬ್ಬರಿ ಅವರ ನೇತೃತ್ವದ ತಂಡ ಯಶಸ್ವಿಯಾಗಿ ಕಾರ್ಯಚರಣೆ ನಡೆಸಿದ್ದು, ದಾಳಿಯಲ್ಲಿ ಲೋಕಾಯುಕ್ತ ಇಲಾಖೆಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ಭಾಗವಹಿಸಿದ್ದರು.

