ಕೆ.ಆರ್ ಪೇಟೆ: ಶಾಸಕ ಹೆಚ್.ಟಿ ಮಂಜು ಹುಟ್ಟು ಹಬ್ಬದ ಹಿನ್ನಲೆ ಅಭಿಮಾನಿಗಳು ಆಯೋಜಿಸಿದ್ದ ಸಂಭ್ರಮದಲ್ಲಿ ಸೂಕ್ತ ನಿರ್ವಹಣೆ ಕೊರತೆಯಿಂದ ಕೈಕಾಲು ಮುರಿದುಕೊಂಡ ಹಲವರು ಆಸ್ಪತ್ರೆ ಸೇರಿದ ಘಟನೆ ನಡೆದಿದೆ
ಮಂಗಳವಾರ ಕೆ.ಆರ್ ಪೇಟೆ ಪಟ್ಟಣದಲ್ಲಿ ನಡೆದ ಸ್ಥಳೀಯ ಶಾಸಕ ಹೆಚ್.ಟಿ ಮಂಜು ಹುಟ್ಟುಹಬ್ಬದ ಆವಾಂತರ. ಶಾಸಕರ ಅಭಿಮಾನಿಗಳು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಉದ್ದೇಶದಿಂದ ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಿಗೆ ಬಿಸಿ ಬಿಸಿ ಬಾಡೂಟದ ಜೊತೆಗೆ ಮಹಿಳೆಯರಿಗೆ ಉಚಿತವಾಗಿ ಸೀರೆ ಹಂಚಲು ತಯಾರಿ ನಡೆದಿತ್ತು
ಹುಟ್ಟುಹಬ್ಬದ ಕಾರ್ಯಕ್ರಮವನ್ನು ಪಟ್ಟಣದ ಪುರಸಭೆ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ತಾಲ್ಲೂಕಿನಿಂದ ಸುಮಾರು 30ರಿಂದ 40 ಸಾವಿರ ಜನರು ಜಮಾವಣೆಗೊಂಡಿದ್ದರು. ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿತ್ತು. ಆದರೆ ಬಾಡೂಟ ಆರಂಭವಾಗುತ್ತಿದ್ದಂತೆ ಜನರು ಊಟದ ಕಡೆ ನುಗ್ಗಿ ಬಂದ ಕಾರಣ ತಳ್ಳಾಟ ಉಂಟಾಗಿ ಹಲವು ಜನರು ಗಾಯಗೊಂಡಿದ್ದಾರೆ.

ಮತ್ತೊಂದು ಕಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯರು ಉಚಿತ ಸೀರೆ ಹಂಚಿಕೆ ವಿಚಾರ ತಿಳಿಯುತ್ತಿದ್ದಂತೆ ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆಗೊಂಡ ಮಹಿಳೆಯರನ್ನು ಗಮನಿಸದ ಆಯೋಜಕರು ಏಕಾಏಕಿ ಸೀರೆ ಹಂಚಿಕೆ ಮತ್ತು ಬಾಡೂಟ ಕೌಂಟರ್ ತೆರೆದ ಹಿನ್ನಲೆ ನೂಕುನುಗ್ಗಲು ಉಂಟಾಗಿದೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ಸೇರುತ್ತಾರೆ ಎಂಬ ನಿರೀಕ್ಷೆ ಹೊಂದಲಾಗಿದ್ದರೂ, ಸೂಕ್ತ ನಿರ್ಗಮನ ಮತ್ತು ಆಗಮನ ವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ
ಊಟದ ವ್ಯವಸ್ಥೆಯ ನಿರ್ವಹಣೆ ಮತ್ತು ಉಚಿತ ಸೀರೆ ಹಂಚಿಕೆಯ ಕೌಂಟರ್ ಬಳಿ ಹೆಚ್ಚಿನ ಪೊಲೀಸ್ ನಿಯೋಜನೆ ಮತ್ತು ಸ್ವಯಂ ಸೇವಕರನ್ನು ನಿಯೋಜನೆ ಮಾಡಿದ್ದರೆ ನೂಕುನುಗ್ಗಲು ಉಂಟಾಗುತ್ತಿರಲಿಲ್ಲ ಎಂಬುದು ಜನರ ಚರ್ಚೆಯಾಗಿದೆ
ಪ್ರಕರಣ ದಾಖಲು ಮಾಡಲು ಪೊಲೀಸರ ಹಿಂದೇಟು :
ಶಾಸಕರ ಹುಟ್ಟುಹಬ್ಬದಲ್ಲಿ ನೂಕಾಟ ಸಂಭವಿಸಿ ಐದಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದರೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ 6 ಗಂಟೆಯಾದರೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಕಾರ್ಯಕ್ರಮ ನಡೆದು 24 ಗಂಟೆ ಕಳೆದರೂ ಗಾಯಾಗಳುಗಳ ಹೇಳಿಕೆಯನ್ನು ದಾಖಲು ಮಾಡಿಕೊಂಡಿಲ್ಲ.
ರಾಜಕೀಯ ಒತ್ತಡ ಹಿನ್ನಲೆ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲು ಸ್ಥಳೀಯ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಶಾಸಕರ ಕಾರ್ಯಕ್ರಮಕ್ಕೆ ಒಂದು ನ್ಯಾಯ, ಸಾಮಾನ್ಯ ಜನರಿಗೆ ಒಂದು ಕಾನೂನನೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ.
ಕಾರಣ ನೂಕುನುಗ್ಗಲು ಉಂಟಾಗಿ ಸುಮಾರು 5ಕ್ಕೂ ಹೆಚ್ಚು ಮಂದಿ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಗಳುಗಳು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ

