ಕ್ಯಾಸಂಬಳ್ಳಿ ಸರ್ವೇ ನಂ. 164 ಸರ್ಕಾರಿ ಜಾಗ ಒತ್ತುವರಿ: ಅಧಿಕಾರಿಗಳ ವಿರುದ್ಧ ಕಾರ್ಯಕರ್ತರ ಆಕ್ರೋಶ – ಗಡಿ ಕಲ್ಲು ಅಳವಡಿಸುವ ಭರವಸೆ
ಕೆಜಿಎಫ್ | ಆಗಸ್ಟ್ 4
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ, ಕೆಜಿಎಫ್ ತಾಲ್ಲೂಕು ಘಟಕದ ವತಿಯಿಂದ ಇಂದು (04-08-2026) ತಾಲ್ಲೂಕು ಅಧ್ಯಕ್ಷ ತ್ರಿಲೋಕ್ ಕೆ.ಎಂ. ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ತಾಲ್ಲೂಕಿನ ಗ್ರಾಮೀಣ ಭಾಗದ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಅದರಲ್ಲೂ ಕ್ಯಾಸಂಬಲ್ಲಿ ಗ್ರಾಮದ ಸರ್ವೇ ನಂ. 164ರಲ್ಲಿ ನಾಡಕಚೇರಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳಿಗೆ ಮೀಸಲಿಟ್ಟಿರುವ ಸರ್ಕಾರಿ ಜಾಗದ ಒತ್ತುವರಿ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ರಾಜಸ್ವ ನಿರೀಕ್ಷಕ (RI) ಮಂಜುನಾಥ್ ಅವರನ್ನು ಕಾರ್ಯಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ತಮ್ಮ ಮೊಬೈಲ್ನ Dishank App ಮೂಲಕ ಸ್ಥಳದಲ್ಲೇ ಪರಿಶೀಲನೆ ನಡೆಸಿ, ಒತ್ತುವರಿಯಾಗಿರುವ ಜಾಗದ ವಿವರವನ್ನು ತೋರಿಸಿದರು.
ಅಲ್ಲದೆ, “ಅತೀ ಶೀಘ್ರದಲ್ಲೇ ಗಡಿ ಕಲ್ಲುಗಳನ್ನು ಅಳವಡಿಸಿ, ಸರ್ಕಾರಿ ಜಾಗದ ಗಡಿಯನ್ನು ಗುರುತಿಸುವ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ಸೋಮಸುಂದರ್ ರೆಡ್ಡಿ, ತಾಲ್ಲೂಕು ಅಧ್ಯಕ್ಷ ತ್ರಿಲೋಕ್ ಕೆ.ಎಂ., ಉಪಾಧ್ಯಕ್ಷ ಯಾದವ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಇರ್ಷಾದ್ ಅಹಮದ್, ಹಾಗೂ ಜಯರಾಮ ರೆಡ್ಡಿ, ಕೃಷ್ಣಾ ರೆಡ್ಡಿ ಮತ್ತು ಅಶ್ವಥ್ ರೆಡ್ಡಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಿಡಿಲುಧ್ವನಿ ವಿಶೇಷ
ಸರ್ಕಾರಿ ಜಾಗಗಳ ರಕ್ಷಣೆ ಹಾಗೂ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆಗಾಗಿ ಅಧಿಕಾರಿಗಳು ತ್ವರಿತ ಮತ್ತು ಪಾರದರ್ಶಕ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ. ಅಧಿಕಾರಿಗಳು ನೀಡಿರುವ ಭರವಸೆ ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.

