ಏಪ್ರಿಲ್ 28 ಬೆಂಗಳೂರು : ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿಕೃಷ್ಣಪ್ಪ ಬಡಾವಣೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಜಾರ್ಖಂಡ್ ಮೂಲದ 34 ವರ್ಷದ ಪೂಜಾ ದತ್ತಾ ಎಂಬ ಮಹಿಳೆ ತನ್ನ ವಾಸದ ಬಾಡಿಗೆ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಈಕೆ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಕೆಲಸ ಬಿಟ್ಟಿದ್ದರು ಎನ್ನಲಾಗಿದೆ.
ಈಕೆಯ ಮೃತದೇಹ ಮನೆಯೊಳಗೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಹತ್ತಾರು ಅನುಮಾನಗಳು ಕಾಡಲು ಶುರುವಾಗಿದೆ
ಮನೆಯಿಂದ ಭೀಕರ ವಾಸನೆ
ಬರುತ್ತಿತ್ತು
ಪೂಜಾ ದತ್ತಾ ಎರಡು ಮೂರು ದಿನಗಳ ಹಿಂದೆಯೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹ ಸಂಪೂರ್ಣವಾಗಿ ಕೊಳೆಯಲು ಶುರುವಾಗಿದ್ದು, ಅಕ್ಕಪಕ್ಕದ ರೂಮಿನವರಿಗೆ ಭೀಕರ ವಾಸನೆ ಬಂದಿದೆ. ಅನುಮಾನಗೊಂಡು ಬಾಗಿಲು ತೆರೆದು ನೋಡಿದಾಗ ಪೂಜಾ ಮೃತದೇಹ ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಆಡುಗೋಡಿ ಪೊಲೀಸರು ಪರಿಶೀಲನೆ ನಡೆಸಿದಾಗ ರೂಮ್ ತುಂಬಾ ಪೇಪರ್ ತುಂಡುಗಳನ್ನು ಹರಿದು ಹಾಕಿರೋದು ಪತ್ತೆಯಾಗಿದೆ.
ಪೂಜಾ ವಾಸವಿದ್ದ ರೂಮಿನ ತುಂಬಾ ಬರೀ ಪೇಪರ್ ಪತ್ತೆಯಾಗಿದೆ. ಡ್ರಾಯಿಂಗ್ ಮಾಡಿರುವ ನೂರಾರು ಪೇಪರ್ ಗಳು ಪತ್ತೆಯಾಗಿವೆ ಪ್ರೇಮ ವೈಫಲ್ಯದಿಂದ ಡಿಪ್ರೆಶನ್ ನಲ್ಲಿದ್ದರಾ ಅನ್ನೋ ಶಂಕೆ ವ್ಯಕ್ತವಾಗಿದೆ. ಯುವಕನ ಹೆಸರು ಬರೆದಿಟ್ಟಿರುವ ಪೇಪರ್ಗಳು ಪತ್ತೆಯಾಗಿವೆ. ಆಡುಗೋಡಿಯ ಮುನಿಕೃಷ್ಣಪ್ಪ ಲೇಔಟ್ನಲ್ಲಿ ಪೂಜ ವಾಸವಿದ್ದರು. ಪೂಜಾ ಕೈ ಮತ್ತು ಕುತ್ತಿಗೆ ಬಳಿ ಗಾಯದ ಗುರುತುಗಳು ಪತ್ತೆಯಾಗಿವೆ.
ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ?
ಮನೆಯಲ್ಲಿ ಪೂಜಾ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಐಡಿ ಕಾರ್ಡ್ ಪತ್ತೆಯಾಗಿದೆ. ಶವ ಬೆತ್ತಲೆ ಸ್ಥಿತಿಯಲ್ಲಿ ಇರುವುದು ಮತ್ತು ರೂಮಿನಲ್ಲಿದ್ದ ಪೇಪರ್ಗಳನ್ನು ಹರಿದು ಹಾಕಿರುವುದು ನೋಡಿದರೆ ಇದೊಂದು ವ್ಯವಸ್ಥಿತ ಸಂಚು ಇರಬಹುದೇ ಎಂಬ ಸಂಶಯ ಮೂಡಿಸಿದೆ.
ಮನೆ ಮಾಲೀಕರು ನೀಡಿದ ಮಾಹಿತಿ ಇಲ್ಲಿದೆ
ಮೃತ ಪೂಜಾ ವಾಸವಿದ್ದ ಮನೆಯ ಮಾಲೀಕ ಜಾನಕಮ್ಮ ಅವರು ಈ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ‘ಪೂಜಾ ದತ್ತಾ ಕಳೆದ ಮೂರು ವರ್ಷಗಳಿಂದ ನನ್ನ ಮನೆಯಲ್ಲಿ ಬಾಡಿಗೆಗೆ ಇದ್ದಳು. ಆಕೆ ಅವಿವಾಹಿತೆಯಾಗಿದ್ದು, ಹೆಚ್ಚಾಗಿ ಹಿಂದಿಯಲ್ಲೇ ಸಂವಹನ ನಡೆಸುತ್ತಿದ್ದಳು. ಆಕೆಯನ್ನು ಭೇಟಿ ಮಾಡಲು ಒಬ್ಬ ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅವನೊಂದಿಗೆ ಪೂಜಾ ಸದಾ ಜಗಳವಾಡುತ್ತಿದ್ದಳು. ಆದರೆ ಆ ಜಗಳಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ.
ದುರ್ನಾತ ಬಂದಾಗ ಬೆಳಕಿಗೆ ಬಂದ ಕೃತ್ಯ
ಕಳೆದ ಗುರುವಾರ ದಿನಸಿ ಸಾಮಗ್ರಿ ತರಲು ಕೆಳಗಿಳಿದು ಬಂದಿದ್ದೇ ಪೂಜಾಳನ್ನು ನೋಡಿದ ಕೊನೆಯ ಕ್ಷಣ ಎಂದು ಜಾನಕಮ್ಮ ತಿಳಿಸಿದ್ದಾರೆ. ಏಪ್ರಿಲ್ 27 ರ ಸಂಜೆ ಮನೆಯಿಂದ ತೀವ್ರ ದುರ್ನಾತ ಬರುತ್ತಿದ್ದ ಕಾರಣ, ಪಕ್ಕದ ಮನೆಯ ಯುವಕರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರ ಸಮ್ಮುಖದಲ್ಲಿ ಬಾಗಿಲು ಒಡೆದು ನೋಡಿದಾಗ, ಪೂಜಾ ಬೆತ್ತಲಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆಯಲ್ಲಿ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಫ್ಯಾನ್ ಚಾಲನೆಯಲ್ಲೇ ಇತ್ತು ಎಂದು ಅವರು ಹೇಳಿದ್ದಾರೆ.
ಸ್ಥಳಕ್ಕೆ ಧಾವಿಸಿದ ಆಡುಗೋಡಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆಗಾಗ ಮನೆಗೆ ಬರುತ್ತಿದ್ದ ಆ ನಿಗೂಢ ಯುವಕ ಯಾರು? ಆತನಿಗೂ ಈ ಸಾವಿಗೂ ಸಂಬಂಧವಿದೆಯೇ? ಎಂಬ ನಿಟ್ಟಿನಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಪೂಜಾಳ ಸಾವಿನ ಹಿಂದಿನ ಅಸಲಿ ಸತ್ಯ ಹೊರಬೀಳಲಿದೆ.

