ಸಿಡಿಲು ದನಿ ನ್ಯೂಸ್ |ಕೋಲಾರ/ ಕ್ಯಾಸೆಂಬಳ್ಳಿ
850 ಮಕ್ಕಳಿಗೆ ಸೂಕ್ತ ತರಗತಿ ಕೊಠಡಿಗಳಿಲ್ಲ!
ಶಾಲಾ ಆವರಣದ ಹೊರಗೆ ಕುಳಿತು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು
ಕ್ಯಾಸೆಂಬಳ್ಳಿ: ಕರ್ನಾಟಕ ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿಗಳಾದ ಕೆ.ಸಿ. ರೆಡ್ಡಿ ಅವರ ತವರೂರಾದ ಕ್ಯಾಸೆಂಬಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತೀವ್ರವಾಗಿದ್ದು, ಸುಮಾರು 850 ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
850 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೂಕ್ತ ತರಗತಿ ಕೊಠಡಿಗಳು ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಕಂಡುಬರುತ್ತಿದೆ. ಪರಿಣಾಮವಾಗಿ ಹಲವು ವಿದ್ಯಾರ್ಥಿಗಳು ಪ್ರತಿದಿನವೂ ಶಾಲೆಯ ಹೊರಾಂಗಣದಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರ ಜೊತೆಗೆ ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಕೇವಲ ಎರಡು ಶೌಚಾಲಯಗಳು ಮಾತ್ರ ಇದ್ದು, ಒಂದು ಹುಡುಗರಿಗೆ ಹಾಗೂ ಮತ್ತೊಂದು ಹುಡುಗಿಯರಿಗೆ ಬಳಕೆಯಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಶೌಚಾಲಯಗಳ ಸಂಖ್ಯೆಯೂ ಅತ್ಯಂತ ಕಡಿಮೆಯಾಗಿದೆ.
ಈ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೆ ಮಕ್ಕಳು ಅನುಭವಿಸುತ್ತಿರುವ ನೋವು ಗಮನಕ್ಕೆ ಬಂದಿಲ್ಲವೇ ಅಥವಾ ಗಮನಕ್ಕೆ ಬಂದಿದ್ದರು ಸಹ ಸರ್ಕಾರಿ ಶಾಲೆ, ಉದ್ದಾರ ಮಾಡುವ ಗಂಭೀರತೆ ಅರಿವಿಲ್ಲವೇ ಈ ಬಗ್ಗೆ ಶಾಸಕರಿಗೆ ಉದಾಸೀನತೆ ನಿರಾಶಕ್ತಿ ಏಕೆ ಎಂಬುದು ಜನರ ಆಕ್ರೋಶವಾಗಿದೆ
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ರಾಜ್ಯ ಮಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ, ಹಲವು ಹೋರಾಟಗಳು ಹಾಗೂ ಮನವಿಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದೆ.
ಈ ಹೋರಾಟಗಳ ಫಲವಾಗಿ ಶಾಲೆಯ ಅಭಿವೃದ್ಧಿಗಾಗಿ 12.30 ಎಕರೆ ಜಮೀನು ಮಂಜೂರಾಗಿದೆ.
ಆದರೆ ಜಮೀನು ಮಂಜೂರಾಗಿ ಇಷ್ಟು ಸಮಯ ಕಳೆದರೂ, ಮಂಜೂರಾಗಿರುವ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಈ ಗಂಭೀರ ಸಮಸ್ಯೆಯ ಬಗ್ಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಮಂಜೂರಾಗಿರುವ 12.30 ಎಕರೆ ಜಮೀನಿನಲ್ಲಿ ಅಗತ್ಯ ಶಾಲಾ ಕಟ್ಟಡ, ತರಗತಿ ಕೊಠಡಿಗಳು, ಶೌಚಾಲಯಗಳು ಹಾಗೂ ಇತರೆ ಮೂಲಭೂತ ಸೌಲಭ್ಯಗಳ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ಮಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಒತ್ತಾಯಿಸಿದೆ.
850 ಮಕ್ಕಳ ಭವಿಷ್ಯದ ಪ್ರಶ್ನೆ ಇದು!
ಹೊರಾಂಗಣದಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿಗೆ ಕೊನೆ ಯಾವಾಗ?
ಮಂಜೂರಾಗಿರುವ ಜಮೀನಿನಲ್ಲಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಯಾವಾಗ ಆರಂಭ?
ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ಯಾಸೆಂಬಳ್ಳಿ ಗ್ರಾಮದ ಮಕ್ಕಳಿಗೆ ಉತ್ತಮ ಶಿಕ್ಷಣದ ವಾತಾವರಣ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.
ಸಿಡಿಲು ದನಿ ನ್ಯೂಸ್
ಜನರ ಧ್ವನಿ — ಜನರ ಸಮಸ್ಯೆ — ಜನರ ಪರವಾದ ಸುದ್ದಿ
#governmentofkarnataka #departmentofeducation #chiefministerofKarnataka #StateRTIandsocialactivistforum #kolara

