ಕ್ಯಾಸಂಬಳ್ಳಿಯಲ್ಲಿ ಮೊಳಗಿದೆ ಜನರ ಕುಂದುಕೊರತೆಗಳ ಧ್ವನಿ!
ಕೋಲಾರ ; ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ‘ಪ್ರಜಾ ಸೇವಾ ಆಂದೋಲನ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಾಲು ಸಾಲು ಸಮಸ್ಯೆಗಳು ಅಧಿಕಾರಿಗಳ ಮುಂದೆ ಸಿಡಿಲುದ್ವನಿಯಾಗಿ ಪ್ರತಿಧ್ವನಿಸಿವೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ದಂಡಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಉನ್ನತಾಧಿಕಾರಿಗಳು ಭಾಗವಹಿಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
‘ಜಮೀನು ಮಂಜೂರಾಗಿದೆ, ಕಾಲೇಜು ಆರಂಭವಾಗಿದೆ… ಆದರೆ ಕಟ್ಟಡ ಎಲ್ಲಿ?’
ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗಾಗಿ ಜಮೀನು ಮಂಜೂರಾಗಿದ್ದು, ತರಗತಿಗಳು ಆರಂಭವಾಗಿದ್ದರೂ ವರ್ಷಗಳಿಂದ ಸ್ವಂತ ಕಟ್ಟಡ ನಿರ್ಮಾಣವಾಗಿಲ್ಲ. ಗುರುತಿಸಲಾಗಿರುವ ಜಮೀನಿನಲ್ಲಿಯೇ ಶೀಘ್ರವಾಗಿ ಕಾಲೇಜು ಕಟ್ಟಡ ಕಾಮಗಾರಿ ಪ್ರಾರಂಭಿಸಬೇಕೆಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಪದಾಧಿಕಾರಿಗಳು ಹಾಗೂ ಸ್ಥಳೀಯರು ಮನವಿ ಸಲ್ಲಿಸಿ ಉಗ್ರವಾಗಿ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಅತಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ರೈತರ ಪರದಾಟ – ಕಚೇರಿಗಳ ಸ್ಥಾಪನೆಗೆ ಒತ್ತಾಯ!
ಕೆಜಿಎಫ್ ತಾಲೂಕಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕಚೇರಿಗಳಿಲ್ಲದೆ, ಸಣ್ಣಪುಟ್ಟ ಕೆಲಸಗಳಿಗೂ ರೈತರು ಬಂಗಾರಪೇಟೆ ಹಾಗೂ ಕೋಲಾರಕ್ಕೆ ಅಲೆಯುವಂತಾಗಿದೆ. ಈ ತೊಂದರೆಯನ್ನು ತಪ್ಪಿಸಲು ಕೆಜಿಎಫ್ ತಾಲೂಕು ವ್ಯಾಪ್ತಿಯಲ್ಲಿಯೇ ತಕ್ಷಣ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಚೇರಿಗಳನ್ನು ಸ್ಥಾಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಈ ಬೃಹತ್ ಪ್ರತಿಭಟನಾತ್ಮಕ ಮನವಿ ಸಭೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸೋಮಸುಂದರ್ ರೆಡ್ಡಿ, ಬಾಬು, ತ್ರಿಲೋಕ್ ಚಂದ್ರ, ಜೈರಾಮ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ ಜನರ ಧ್ವನಿಯಾಗಿ ನಿಂತರು.
ಕ್ಯಾಸಂಬಳ್ಳಿ ಭಾಗದ ಶಿಕ್ಷಣ, ಕೃಷಿ ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

