ಶಿಕ್ಷಕನ ಕಿರುಕುಳದ ಆರೋಪ: 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ! ಖಾಸಗಿ ಶಾಲೆಯ ವಿರುದ್ಧ ಗಂಭೀರ ಆರೋಪ

ತುಮಕೂರು/ಕುಣಿಗಲ್: ಅಕ್ಟೋಬರ್ 30
ಕಳೆದ ಕೆಲವು ತಿಂಗಳುಗಳ ಹಿಂದೆ ಇದೇ ಅರವಿಂದ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಟಾಪ್ ಮೇಲಿಂದ ಅನುಮಾನಾಸ್ಪದವಾಗಿ ಕೆಳಗೆ ಬಿದ್ದು ಕೈಕಾಲು ಮುರಿದುಕೊಂಡು ಪ್ರಾಣಪಾಯದಿಂದ ಪಾರಾಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದು ಮನೆಗೆ ಸೇರಿದ ಕೆಲವೇ ತಿಂಗಳುಗಳಲ್ಲಿ ಮತ್ತೊಂದು ಘಟನೆ ನಡೆದಿರುವುದು ಪೋಷಕರಿಗೆ ಆತಂಕ ಉಂಟು ಮಾಡಿದೆ
ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಮೊಬೈಲ್ ಸಂದೇಶಗಳ ಮೂಲಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಮನನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕುಣಿಗಲ್ ತಾಲ್ಲೂಕಿನ ಅರವಿಂದ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಎಲ್ಕೆಜಿಯಿಂದಲೇ ವಿದ್ಯಾಭ್ಯಾಸ ಮಾಡುತ್ತಿದ್ದ, ಪ್ರಸ್ತುತ 9ನೇ ತರಗತಿಯಲ್ಲಿ ಓದುತ್ತಿದ್ದ ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿ ವ್ಯಾಪ್ತಿಯ ಗರಗದಕುಪ್ಪೆ ಗ್ರಾಮದ ಸಿ.ಎಸ್. ಯೋಗೇಶ್ವರಿ ಮೃತಪಟ್ಟ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.
ಇದೇ ಶಿಕ್ಷಣ ಸಂಸ್ಥೆಯಲ್ಲಿ ಅನೇಕ ರೀತಿಯಾಗಿ ಮಾರಣಾಂತಿಕ ನೋವುಗಲಾಗಿದ್ದು ವಿದ್ಯಾರ್ಥಿಗಳು ಮತ್ತಿತರರು ಸಾವನ್ನಪ್ಪುತಿದ್ದರೂ ತಡೆಗಟ್ಟಲಾಗದ ಶಿಕ್ಷಣ ಇಲಾಖೆ ಮತ್ತು ರಕ್ಷಣಾ ಇಲಾಖೆ ಕಾರ್ಯವೈಖರಿಯ ಬಗ್ಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಶಿಕ್ಷಕನ ವಿರುದ್ಧ ಕಿರುಕುಳದ ಆರೋಪ
ಪೋಷಕರು ಮಾಡಿರುವ ಆರೋಪದ ಪ್ರಕಾರ, ಶಾಲೆಯ ಹಿಂದಿ ಶಿಕ್ಷಕ….. ಎಂಬಾತ ವಿದ್ಯಾರ್ಥಿನಿಗೆ ಮೊಬೈಲ್ ಮೂಲಕ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದ ಪೋಷಕರು ಶುಕ್ರವಾರ ಶಾಲೆಗೆ ತೆರಳಿ ಮುಖ್ಯ ಶಿಕ್ಷಕರಿಗೆ ಸಂಬಂಧಿತ ಶಿಕ್ಷಕನ ವರ್ತನೆಯ ಕುರಿತು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಹುಶಃ ಇದೇ ಕಾರಣಕ್ಕಾಗಿ ಶಾಲೆಯಲ್ಲಿ ಮತ್ತೆ ಟಾರ್ಚರ್ ಆಗಿರಬಹುದು ಎಂಬ ಸಂದೇಹ ವ್ಯಕ್ತವಾಗಿದೆ

ನಂತರ ಪೋಷಕರು ಮನೆಗೆ ಮರಳಿ, ಹೆಬ್ಬೂರು ಸಂತೆಗೆ ತೆರಳಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.
ದೂರು ಸ್ವೀಕರಿಸುವಲ್ಲಿ ಪೊಲೀಸರ ನಿರ್ಲಕ್ಷ್ಯವೇ?
ಘಟನೆಯ ಬಳಿಕ ನ್ಯಾಯಕ್ಕಾಗಿ ಹೆಬ್ಬೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದಾಗ, ಪ್ರಕರಣ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸೂಚಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ವಿದ್ಯಾರ್ಥಿನಿಯ ಸಾವಿನಂತಹ ಗಂಭೀರ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ತಕ್ಷಣ ಸ್ಪಂದಿಸಿ, ದೂರು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಸಂಬಂಧಪಟ್ಟ ಪೊಲೀಸ್ ಇಲಾಖೆಯ ಮೇಲಿದೆ.
ನ್ಯಾಯಕ್ಕಾಗಿ ಕುಟುಂಬಸ್ಥರ ಆಗ್ರಹ
ಈ ಘಟನೆಯಿಂದ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದು, ವಿದ್ಯಾರ್ಥಿನಿಯ ಸಾವಿಗೆ ಕಾರಣವಾದ ನೈಜ ಸಂಗತಿಗಳು ತನಿಖೆಯಿಂದ ಹೊರಬರಬೇಕಿದೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಮುಖ ಆಗ್ರಹಗಳು:
- ವಿದ್ಯಾರ್ಥಿನಿಗೆ ಸಂದೇಶ ಕಳುಹಿಸಿದ್ದಾನೆ ಎನ್ನಲಾದ ಶಿಕ್ಷಕನ ಮೊಬೈಲ್ ಸಂದೇಶಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಬೇಕು.
- ಶಾಲೆಯ ಮುಖ್ಯಸ್ಥರು ಹಾಗೂ ಸಂಬಂಧಪಟ್ಟ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕು.
- ಪೋಷಕರು ನೀಡಿದ ದೂರಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು.
- ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲು ನಿರಾಕರಿಸಲಾಗಿದೆ ಎಂಬ ಆರೋಪದ ಬಗ್ಗೆಯೂ ಪರಿಶೀಲನೆ ನಡೆಸಬೇಕು.
- ವಿದ್ಯಾರ್ಥಿನಿಯ ಸಾವಿನ ಹಿಂದಿನ ನೈಜ ಕಾರಣಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಈ ಒಂದು ವಿದ್ಯಾರ್ಥಿನಿಯ ಜೊತೆಗೆ ಈಗಾಗಲೇ ಅನೇಕ ಜೀವಗಳು ಕಳೆದುಹೋಗಿವೆ ಮತ್ತು ಮಾರಣಾಂತಿಕ ನೋವುಗಳಾಗಿವೆ. ಮತ್ತಿನ್ಯಾವ ವಿದ್ಯಾರ್ಥಿಗಳಿಗೂ ಇಂತಹ ಪರಿಸ್ಥಿತಿ ಎದುರಾಗದಂತೆ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ, ಶಿಕ್ಷಕರ ಜವಾಬ್ದಾರಿ ಮತ್ತು ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
ಸಂಬಂಧಪಟ್ಟ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ.
ಸಿಡಿಲುಧ್ವನಿ ಡಿಜಿಟಲ್ ನ್ಯೂಸ್
ಜನರ ಧ್ವನಿ – ಸತ್ಯದ ಅನಾವರಣ

