ಕ್ಯಾಸಂಬಳ್ಳಿ ಆರೋಗ್ಯ ಕೇಂದ್ರದಲ್ಲಿ ಮೂಲಸೌಕರ್ಯ ಕೊರತೆ: ರಾತ್ರಿ ವೇಳೆ ರೋಗಿಗಳು, ಮಹಿಳಾ ಸಿಬ್ಬಂದಿಗೆ ಆತಂಕ
ಕೋಲಾರ/ಕ್ಯಾಸಂಬಳ್ಳಿ: ಕ್ಯಾಸಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಪದಾಧಿಕಾರಿಗಳು ಭೇಟಿ ನೀಡಿ, ಆಸ್ಪತ್ರೆಯಲ್ಲಿನ ಮೂಲಸೌಕರ್ಯ ಹಾಗೂ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ರೋಗಿಗಳು ಮತ್ತು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ಕುಶರೋಪರಿ ಚರ್ಚೆ ನಡೆಸಲಾಯಿತು.
ಕ್ಯಾಸಂಬಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿದಿನ ನೂರಾರು ಮಂದಿ ಚಿಕಿತ್ಸೆಗಾಗಿ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸುತ್ತಾರೆ. ಆದರೆ ಆಸ್ಪತ್ರೆ ಆವರಣದಲ್ಲಿ ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಇಲ್ಲದಿರುವುದು ರಾತ್ರಿ ವೇಳೆಯಲ್ಲಿ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸಮಸ್ಯೆಯಾಗಿದೆ ಎಂದು ವೇದಿಕೆ ತಿಳಿಸಿದೆ.

ವಿಶೇಷವಾಗಿ ಆಸ್ಪತ್ರೆ ಆವರಣದಲ್ಲಿ ಬೆಳಕಿನ ಕೊರತೆಯಿಂದ ಹಾವುಗಳು ಆಸ್ಪತ್ರೆ ಕಟ್ಟಡ ಹಾಗೂ ಸಿಬ್ಬಂದಿಗಳ ವಸತಿ ನಿಲಯದೊಳಗೆ ಬರುತ್ತಿರುವ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಲಾಗಿದೆ. ಇದರಿಂದ ರಾತ್ರಿಯ ವೇಳೆ ಚಿಕಿತ್ಸೆಗಾಗಿ ಬರುವ ರೋಗಿಗಳು, ಗರ್ಭಿಣಿಯರು ಹಾಗೂ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇದಲ್ಲದೆ, ರಾತ್ರಿ ಪಾಳಿಯಲ್ಲಿ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಸುರಕ್ಷತೆಯ ದೃಷ್ಟಿಯಿಂದ ಕಾಯಂ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಆಸ್ಪತ್ರೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಹಾಗೂ ಲಭ್ಯವಿರುವ ಸಂಬಂಧಿತ ಸ್ಥಳೀಯ ಸಂಸ್ಥೆಗಳ ಅನುದಾನವನ್ನು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಕ್ಕೆ ಸಮರ್ಪಕವಾಗಿ ಬಳಸುವ ಕುರಿತು ಗ್ರಾಮ ಪಂಚಾಯಿತಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಮನವಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಹಾಗೂ ಸಿಬ್ಬಂದಿಗಳ ವಸತಿ ನಿಲಯಗಳ ಸುತ್ತಮುತ್ತ ತುರ್ತಾಗಿ ಹೊಸ ವಿದ್ಯುತ್ ದೀಪಗಳನ್ನು ಅಳವಡಿಸುವುದು, ಹಾಳಾಗಿರುವ ದೀಪಗಳನ್ನು ದುರಸ್ತಿಪಡಿಸುವುದು ಮತ್ತು ಮಹಿಳಾ ಸಿಬ್ಬಂದಿಯ ಸುರಕ್ಷತೆಗಾಗಿ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷರಾದ ಸೋಮಸುಂದರ್ ರೆಡ್ಡಿ, ಕೆಜಿಎಫ್ ತಾಲ್ಲೂಕು ಅಧ್ಯಕ್ಷರಾದ ತ್ರಿಲೋಕ್ ಕೆ.ಎಂ., ಕಾರ್ಯಕಾರಿ ಸಮಿತಿ ಸದಸ್ಯರಾದ ಜಯರಾಮ ರೆಡ್ಡಿ ಹಾಗೂ ಅಶ್ವಥ್ ರೆಡ್ಡಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಿಡಿಲುಧ್ವನಿ ಡಿಜಿಟಲ್ ನ್ಯೂಸ್ – ಜನರ ಧ್ವನಿ, ಸಮಸ್ಯೆಗಳ ವರದಿ.

