ಪೊಲೀಸ್ ಠಾಣೆಗಳ ಆಯುಧ ಪೂಜೆಗೆ ಸರ್ಕಾರದಿಂದಲೇ ವಿಶೇಷ ಅನುದಾನ ನೀಡಲಿ: ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕೋಲಾರ ಜಿಲ್ಲಾ ವರಿಷ್ಟಾಧಿಕಾರಿಗಳ ಮೂಲಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಹಾಗೂ ಗೃಹಮಂತ್ರಿಗಳಿಗೆ ಇಂದು ಮನವಿ ಸಲ್ಲಿಸಿದೆ
ಕೋಲಾರ : ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳು, ಕಾರ್ಖಾನೆಗಳು, ವ್ಯಾಪಾರಸ್ಥರು, ಗುತ್ತಿಗೆದಾರರು ಹಾಗೂ ಸಾರ್ವಜನಿಕರಿಂದ ಅನಧಿಕೃತವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳಿಗೆ ಕಡಿವಾಣ ಹಾಕುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ.), ಕರ್ನಾಟಕದ ಕೋಲಾರ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿದರು
ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ, ಪೊಲೀಸ್ ಠಾಣೆಗಳಲ್ಲಿ ಪ್ರತಿವರ್ಷ ಆಯುಧ ಪೂಜೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದ್ದು, ಇದರ ವೆಚ್ಚಕ್ಕಾಗಿ ಕೆಲವೆಡೆ ಪೊಲೀಸ್ ಠಾಣೆ ಅಥವಾ ಪೊಲೀಸ್ ಸಿಬ್ಬಂದಿಯ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಹಣ ಅಥವಾ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬ ದೂರುಗಳು ಹಿಂದಿನಿಂದಲೂ ಕೇಳಿಬರುತ್ತಿವೆ ಎಂದು ತಿಳಿಸಲಾಗಿದೆ.
ಪೊಲೀಸ್ ಇಲಾಖೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪ್ರಮುಖ ಸರ್ಕಾರಿ ಇಲಾಖೆಯಾಗಿರುವ ಹಿನ್ನೆಲೆಯಲ್ಲಿ, ಪೊಲೀಸ್ ಠಾಣೆಗಳ ಹೆಸರಿನಲ್ಲಿ ಯಾವುದೇ ರೀತಿಯ ಅನಧಿಕೃತ ಹಣ ಸಂಗ್ರಹಣೆ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಲ್ಲಿ ಅನುಮಾನ ಮೂಡಿಸುವುದಲ್ಲದೆ, ಇಲಾಖೆಯ ಮೇಲಿನ ಸಾರ್ವಜನಿಕ ನಂಬಿಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವೇದಿಕೆ ಮನವಿಯಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು, ಪೊಲೀಸ್ ವೃತ್ತ ಕಚೇರಿಗಳು ಹಾಗೂ ಸಂಬಂಧಿತ ಪೊಲೀಸ್ ಘಟಕಗಳಿಗೆ ಆಯುಧ ಪೂಜೆಯ ವೆಚ್ಚಕ್ಕಾಗಿ ಪ್ರತಿವರ್ಷ ಪ್ರತ್ಯೇಕ ಸರ್ಕಾರಿ ಅನುದಾನವನ್ನು ನಿಗದಿಪಡಿಸಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಅಲ್ಲದೆ, ಪ್ರತಿ ಪೊಲೀಸ್ ಠಾಣೆಗೆ ನೀಡುವ ಅನುದಾನದ ಮೊತ್ತ, ಬಿಡುಗಡೆ ದಿನಾಂಕ ಹಾಗೂ ಖರ್ಚಿನ ವಿವರಗಳನ್ನು ಪಾರದರ್ಶಕವಾಗಿ ದಾಖಲಿಸುವ ವ್ಯವಸ್ಥೆ ಕಲ್ಪಿಸಬೇಕು. ಆಯುಧ ಪೂಜೆ ಅಥವಾ ಇಲಾಖಾ ಕಾರ್ಯಕ್ರಮಗಳ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳು, ಕೈಗಾರಿಕೆಗಳು, ವ್ಯಾಪಾರಸ್ಥರು, ಗುತ್ತಿಗೆದಾರರು ಮತ್ತು ಸಾರ್ವಜನಿಕರಿಂದ ಹಣ ಸಂಗ್ರಹಿಸದಂತೆ ಸ್ಪಷ್ಟವಾದ ಸರ್ಕಾರಿ ಆದೇಶ ಅಥವಾ ಸುತ್ತೋಲೆ ಹೊರಡಿಸಬೇಕು ಎಂದು ಮನವಿ ಮಾಡಲಾಗಿದೆ.

ಹಣ ಸಂಗ್ರಹಣೆ ಕುರಿತು ದೂರುಗಳು ಬಂದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ನಿಷ್ಪಕ್ಷಪಾತವಾಗಿ ಪರಿಶೀಲನೆ ನಡೆಸಿ, ಅಕ್ರಮವೆಂದು ದೃಢಪಟ್ಟರೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಜೊತೆಗೆ ಆಯುಧ ಪೂಜೆಗೆ ನೀಡುವ ಸರ್ಕಾರಿ ಅನುದಾನದ ಬಳಕೆ ಮತ್ತು ಲೆಕ್ಕಪತ್ರಗಳ ಪರಿಶೀಲನೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ವೇದಿಕೆ ಆಗ್ರಹಿಸಿದೆ.
ಸರ್ಕಾರಿ ಹುದ್ದೆಯ ಪ್ರಭಾವ ಬಳಸಿಕೊಂಡು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಹಣ, ವಸ್ತು ಅಥವಾ ಇತರೆ ಕೊಡುಗೆಗಳನ್ನು ಪಡೆಯದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಏಕರೂಪದ ನಿಯಮಗಳನ್ನು ರೂಪಿಸುವ ಮೂಲಕ ಪೊಲೀಸ್ ಇಲಾಖೆಯನ್ನು ಅನಧಿಕೃತ ಹಣ ಸಂಗ್ರಹಣೆಯ ಆರೋಪಗಳಿಂದ ಮುಕ್ತಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪೊಲೀಸ್ ಇಲಾಖೆಯ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸರ್ಕಾರ ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಆಯುಧ ಪೂಜೆಗೆ ಅಗತ್ಯವಿರುವ ವಿಶೇಷ ಅನುದಾನವನ್ನು ಪ್ರತಿವರ್ಷ ಬಜೆಟ್ ಅಥವಾ ಇಲಾಖಾ ಅನುದಾನದ ಮೂಲಕ ಒದಗಿಸಬೇಕು ಎಂದು ವೇದಿಕೆಯ ಕೋಲಾರ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದರು

ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಸೋಮ ಸುಂದರ ರೆಡ್ಡಿ ಜಿಲ್ಲಾ ಅಧ್ಯಕ್ಷರಾದ ರಾಮಾಂಜುನಪ್ಪ ಪ್ರಧಾನ ಕಾರ್ಯದರ್ಶಿ ಬೆಟ್ಟಪ್ಪ ಉಪಾಧ್ಯಕ್ಷರಾದ ಆನಂದ್.ಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು

